ಶ್ಯಾಲ್ ವೀ ಡಾನ್ಸ್ ??? ... ಭಾಗ ೧

ಅವನು ಕೈ ಮುಂದಕ್ಕೆ ಇಟ್ಟು "ಬಾ ಡಾನ್ಸ್ ಮಾಡೋಣ" ಅಂತ ಕರೆದಾಗ ಅವಳು ನಾಚುತ್ತಲೇ ಮುಂಗುರುಳನ್ನು ಬೆರಳುಗಳ ಸಹಾಯದಿಂದ ಆಡಿಸುತ್ತ "ಇಲ್ಲ ನಂಗೆ ಡಾನ್ಸ್ ಮಾಡೋಕ್ಕೆ ಬರುವುದಿಲ್ಲ" ಎಂದಳು. "ಮುಜುಗರವೇಕೋ? ಸತ್ಯವಾಗಲು ನಿಂಗೆ ಡಾನ್ಸ್ ಬರೋದಿಲ್ವಾ?" ಅಂತ ಮತ್ತೆ ಮೃದುವಾದ ಅವಳ ಕೈಯ ಹಿಡಿದು ಕರೆದ. ಈ ಹೊತ್ತಿಗೆ ಅವಳ ಕಣ್ಣ ಅಂಚಲ್ಲಿ ವಜ್ರದಂತೆ ಹೊಳೆಯುತ್ತಿದ್ದ ಕಣ್ಣೀರ ಹನಿಯೊಂದು ಮನೆ ಮಾಡಿತ್ತು. ಅದನ್ನು ಕಂಡ ಅವನು "ಹೇಯ್ ವಿಭಾ ! ನಾನು ಸುಮ್ನೆ ತಮಾಷೆಗೆ ಹಾಗೆ ಕರೆದೆ.. ಡೋಂಟ್ ವರಿ. ನಿಂಗೆ ಇಷ್ಟ ಇಲ್ಲ ಅಂದ್ರೆ ಇಲ್ಲಿಂದ ಹೊರಡೋಣ. ಬೇರೆ ಕಡೆ ಹೋಗಿ ಊಟ ಮಾಡೋಣ" ಎಂದು ಹೇಳಿದ.

ವಿಭಾ ತನ್ನ ತಲೆಯನ್ನು ಅವನ ಎದೆಯ ಮೇಲಿಟ್ಟು ಮುಖವನ್ನು ಮುಚ್ಚಿ ಅಳಲು , ಅವನಿಗೆ ಏನಾಯಿತೆಂಬ ಅರಿವಿಲ್ಲದೆ ಕಕ್ಕಾಬಿಕ್ಕಿಯಾಗಿ ನಿಂತನು. ಎರಡು ಕ್ಷಣದಲ್ಲಿ ಅವಳು ಎಚ್ಚೆತ್ತು ಅವನನ್ನು ತಳ್ಳಿ ಹಿಂದೆ ಸರಿದಳು. ಚಾರಿಶ್ಚಿತ್ ಇನ್ನೂ ಆಶ್ಚರ್ಯದಲ್ಲೇ ನಿಂತಿದ್ದನು. ಮತ್ತೆರಡು ಕ್ಷಣಗಳ ನಂತರ ಅವನು ತೊದಲು ನುಡಿಯಲ್ಲೇ "ವಿಭಾ ನನ್ನ ಮಾತಿನಿಂದ ನಿನಗೆ ನೋವಾಗಿದ್ದರೆ ನನ್ನನ್ನು ದಯವಿಟ್ಟು ಕ್ಷಮಿಸು " ಎಂದನು. ಕಣ್ಣೀರ ಒರೆಸುತ್ತಾ "ಇಲ್ಲ ಚಾರೂ , ಐ ಅಂ ಸಾರೀ , ಮನೆಗೆ ಹೋಗೋಣ್ವಾ. ನನಗೆ ಹಸಿವಿಲ್ಲ" ಅಂತ ಹೇಳಿ ಬಾಗಿಲೆಡೆಗೆ ಹೊರಟಳು. ಚಾರೂಗೆ ಅವಳನ್ನು ಹಿಂಬಾಲಿಸುವದಷ್ಟೇ ಉಳಿದಿದ್ದು.

ಹೆಜ್ಜೆಗಳನ್ನು ಸರಸರನೆ ಇಡುತ್ತ ಪಾರ್ಕಿಂಗ್ ನಲ್ಲಿಟ್ಟ ಕಾರ್ ಹತ್ತಿರ ಬಂದು ನಿಂತಿದ್ದಳು. ಚಾರೂ ಹಿಂದೆಯೇ ಬಂದು ಕಾರನ್ನು ಅನ್ಲಾಕ್ ಮಾಡಲು, ಬೀಪ್ ಎಂದ ಶಬ್ದ, ಹತ್ತು ನಿಮಿಷದ ಮೌನವನ್ನು ಮಾಸಿತು. ಇಂಜಿನ್ ಸ್ಟಾರ್ಟ್ ಮಾಡಿದೊಡನೆ ಬೆಕ್ಕಿನಂತೆ ಬಂದು ಮುದುಡಿ ಕುಳಿತಳು ವಿಭಾ. ಮತ್ತೆ ಮೌನ.. ಮನಗಳೆರಡು ಸಂಪೂರ್ಣ ಖಾಲಿ ಹಾಳೆಯಂತೆ , ಅದರಲ್ಲಿ ಬರೆಯೋಣವೆಂದರೆ ಲೇಖನಿಯಲ್ಲಿ ಇಂಕ್ ಮುಗಿದಿದೆ, ಪೆನ್ಸಿಲ್ ಹುಡುಕಿದರೆ ಪದಗಳು ಮರೆತು ಹೋದ ಹಾಗೆ... ಈ ತರಹವಿದ್ದ ಸನ್ನಿವೇಶದಲ್ಲಿ ಚಾರೂ ಗಾಡಿಯನ್ನು ಬೇ ಬ್ರಿಡ್ಜ್ ಹತ್ತಿರವಿದ್ದ "ಸೀ ಔಟ್ ರೆಸ್ಟೋರಂಟ್" ಹತ್ತಿರ ತಂದು ನಿಲ್ಲಿಸಿ - "ವಿಭಾ ಇಲ್ಲಿ ಒಂದು ಸ್ವಲ್ಪ ಹೊತ್ತು ಕೂರೋಣವೇ?" ಎಂದು ಅವಳ ಕಣ್ಣಲ್ಲಿ ಕಣ್ಣಿಟ್ಟು ಕೇಳಿದ. ವಿಭಾ ಹ್ಞೂ ಎಂದು ತಲೆಯಾಡಿಸಿದಳು.

Comments

Kavita: Thanks for dropping a hi.. I know this is something you cannot understand. To summarize I am attempting short story writing in Kannada. Will try to post next series in English !!

Popular Posts