ಒಂದು ಜೋಡಿ - ಫ್ಲಾಶ್ ಬ್ಯಾಕ್ ! ಭಾಗ ೬

ಕ್ರಿಶನ್ : ನೋಡು ನಿನಗೆ ನನ್ನ ಬಗ್ಗೆ ಏನ್ ಅಭಿಪ್ರಾಯ ಇದ್ಯೋ ನಂಗೆ ಗೊತ್ತಿಲ್ಲ . ನನಗೆ ನೀನು ತುಂಬಾ ಇಷ್ಟ ಆಗಿದ್ಯ . ಐ ಫೀಲ್ ಗುಡ್ ವಿಥ್ ಯೂ. ನಿಮ್ಮ ತಂದೆ ತಾಯಿಗೆ ನನ್ನ ಒಪ್ಪಿಗೆ ತಿಳಿಸುವ ಮೊದಲು ನಾನು ನಿನ್ನ ಹತ್ರ ಒಂದು ವಿಷ್ಯ ಹಂಚಿಕೊಳ್ಳಲು ಇಷ್ಟ ಪಡ್ತೀನಿ . ನಾನು ಕಾಲೇಜಿನಲ್ಲಿ ಇದ್ದಾಗ ಪ್ರಿಯ ಅಂತ  ಒಂದು ಹುಡುಗಿಯನ್ನ ತುಂಬಾ ಪ್ರೀತಿಸಿದ್ದೆ .ಅದು ಪ್ರೀತಿಯೋ ಆಕರ್ಷಣೆಯೋ .. ಅವ್ಳು ಸಹ ನನ್ನ ಭಾವನೆಗೆ  ಸ್ಪಂದಿಸುತ್ತಾ ಹೊರಟಳು . ಕಾಲೇಜ್ ಮುಗಿಯಲು ಅವಳು ನನ್ನಿಂದ ದೂರವಗುತ್ತಾಳೇನೋ ಅನ್ನೋ ಭಯ ಕಾಡುತಿತ್ತು. ಅಂದು ಕಾಲೇಜಿನ ಕಡೇ ದಿನ . ಪರೀಕ್ಷೆ ಮುಗಿದಿತ್ತು . ಅವಳಿಗೆ ಬೇರೊಂದು ಊರಿನಲ್ಲಿ ನೌಕರಿ ಖಾತ್ರಿಯಾಗಿತ್ತು. ಓದಿನಲ್ಲಿ ಎಲ್ಲರಿಗಿಂತ ಚುರುಕಾಗಿದ್ದಳು, ನಮ್ಮ ಕ್ಲಾಸ್ನಲ್ಲಿ ಅವಳದ್ದೇ ಲೀಡಿಂಗ್ ಸ್ಕೋರ್ ಪ್ರತಿ ಸೆಮಿಸ್ಟರಿನಲ್ಲು ..ಅವತ್ತು ನಾನು ಪರೀಕ್ಷೆ ಮುಗಿಸಿ ಹೊರಕ್ಕೆ ಬಂದವನೇ ಪ್ರಿಯಾಳನ್ನು ಹುಡುಕುತ್ತಾ ಹೊರಟೆ . ಆದರೆ ಅವಳು ಆಗಲೇ ಮನೆಗಿ ಹಿಂತಿರುಗಿ ಹೋಗಿದ್ದ ವಿಷಯ ತಿಳಿದು ಬಂದಿತು.  ಮೊಬೈಲ್ ಫೋನ್ ಕರೆಗಳು ದುಬಾರಿ ಇದ್ದ ಸಮಯ ಅದು. ನನ್ನ ಕೈನಲ್ಲಿ ಫೋನ್ ಇರಲಿಲ್ಲ ಆದರೆ ಪ್ರಿಯಾಳ ತಂದೆ ಮಲೆನಾಡಲ್ಲಿ ಶ್ರೀಮಂತ ಮನೆತನದವರು . ಅವಳೊಂದಿಗೆ ದಿನಕ್ಕೊಮ್ಮೆ
ಮಾತಾಡಲು ಮೊಬೈಲ್ ಕೊಡಿಸಿದ್ದರು . ಸರಿ ಕಾಲೇಜ್ ಪಕ್ಕದಲ್ಲೇ ಇದ್ದ ಕಾಯಿನ್ ಬೂತ್ ಒಂದರಿಂದ ನಂಬರ್ ಡಯಲ್ ಮಾಡಿದೆ.  ೯೮೪೫ ...... ಫೋನ್ ರಿಂಗ್ ನನ್ನ ಹೃದಯದ ಬಡಿತದ ಜೊತೆಗೆ ರೇಸ್ ಪ್ರಾರಂಭಿಸಿತ್ತು .

"ಪ್ರಿಯ , ಎಲ್ಲಿದ್ಯಾ ?"


"ಒಹ್ ಕ್ರಿಶನ್ , ನಂಗೆ ಇವತ್ತೇ ಊರಿಗೆ ಹೊರಡಬೇಕಾಗಿದೆ. ಅಜ್ಜಿಗೆ ತುಂಬಾ ಹುಷಾರಿಲ್ಲ ಅಂತ ಅಪ್ಪ ಫೋನ್ ಮಾಡಿದ್ರು. ನಿಂಗೆ ಹೇಳಿ ಹೊರೋಡೋಣ ಅಂತ ಇದ್ದೆ. ಆದ್ರೆ ನೀನು ಇನ್ನು ಹಾಲ್ ಇಂದ ಹೊರಗೆ ಬಂದಿರಲಿಲ್ಲ. ಗಿಡ್ದನ ಹತ್ರ ಒಂದು  ಲೆಟರ್ ಕೊಟ್ಟಿದ್ದೀನಿ . ಸೀ ಯೌ . ಬೈ . ಲೇಟ್ ಆಗ್ತಾ ಇದೆ."


"ಓಕೆ ಪ್ರಿಯ . ಹುಷಾರಾಗಿ ಹೋಗು ."


"ಬೈ "


ಅದೇ ಕೊನೆ ಬಾರಿ ನಾನವಳ ಧ್ವನಿ ಕೇಳಿದ್ದು . 

ಸ್ವಾತಿ ಯಾವುದೋ ಒಂದು ಸಿನಿಮಾ ಕಥೆ ಕೇಳುತ್ತಿದ್ದಂತೆ "ಮುಂದೇನಾಯಿತು " ಎಂದು ಪ್ರಶ್ನಿಸಿದಳು .

ಕ್ರಿಶನ್ : "ಗಿಡ್ಡ ನ ಹತ್ರ ಲೆಟರ್ ಕೊಟ್ಟಿದಳಲ್ಲ ಅದನ್ನ ಓಪನ್ ಮಾಡಿ ಓದಿದೆ ."

ಸ್ವಾತಿ : " ಹಾಂ ಲೆಟರ್ ನಲ್ಲಿ ಏನು ಬರೆದಿದ್ಲು?"

ಕ್ರಿಶನ್ : " ಪ್ರೀತಿಯ ಕ್ರಿಶನ್ ,
               ನಾನು ಪರೀಕ್ಷೆ ಮುಗಿಸಿದ ತಕ್ಷಣ ಊರಿಗೆ ಹೊರಡಬೇಕಾಗಿ ಅಪ್ಪನ ಆಜ್ಞೆ ಆಗಿದೆ.  ನಾನು ಚಿಕ್ಕವಳಾಗಿದ್ದಾಗಲೇ ಊರಲ್ಲಿ ನಮ್ಮ ಮಾವನ ಜೊತೆಗೆ ನನ್ನ ಮದುವೆ  ನಿಶ್ಚಯ ಮಾಡಿದ್ದಾರೆ . ಹಾಗಾಗಿ ನಿನ್ನ ಬಗ್ಗೆ ಒಲವಿದ್ದರೂ ನಾನು ಇಂದಿನ ವರೆಗೂ ಅದನ್ನ ತೋರಿಸಿಕೊಂಡಿರಲಿಲ್ಲ. ನೀನು ನನ್ನ ತುಂಬಾ ಪ್ರೀತಿಸುತ್ತಿರುವೆ ಎಂದು ನನಗೆ ಗೊತ್ತಿದೆ. ಆದರೆ ಅನಿವಾರ್ಯದ ಕಾರಣದಿಂದ ನಾನು ಊರಿಗೆ ಹೊರಟಿದ್ದೇನೆ. ಯಾರಾದರು ನಮ್ಮಿಬ್ಬರ ಬಗ್ಗೆ ಕೇಳಿದಲ್ಲಿ  ದಯವಿಟ್ಟು ಈ ವಿಷಯ ತಿಳಿಸಬೇಡ. ನನ್ನ ಮನದಲ್ಲಿ ಸದಾ ನೀನು ಒಂದು ಅರಳಿದ ಹೂವಿನಂತೆ ಬೆಳಗುತ್ತಿರುವೆ. ನಿನ್ನ ನಗು ಮುಖ ಹಾಗೆ ನಗು ಮಾಸದೆ ಇರಲಿ ಎಂದು ಆಶಿಸುವ -


ನಿನ್ನ ಗೆಳತಿ ,
ಪ್ರಿಯ.


ಹೀಗೆ ಬರೆದಿಟ್ಟು ಸಹಿ ಹಾಕಿ ನನ್ನಿಂದ ಬಲು ದೂರ ಸಾಗಿದ್ದಳು. ನಾನು ತುಂಬಾ ಹುಡುಕಾಡಿದೆ. ಅವಳ ಊರಿಗೆ ಹೋದೆ ಆದರೆ ಅಲ್ಲಿಂದ ಅವರ ಮನೆಯವರೆಲ್ಲಾ ಊರು ಬಿಟ್ಟು ವಿದೇಶಕ್ಕೆ ಹೋಗಿ ಸೆಟಲ್ ಆಗಿದ್ದ ವಿಷ್ಯ ತಿಳಿಯಿತು . ಮನಸಲ್ಲಿ ಅವಳಿಲ್ಲದ ಕೊರಗು ಕಾಡುತಿತ್ತು . ಜೀವನ ಅಲ್ಲಿಗೆ ಮುಗಿಯಬಾರದು , ನಾನು ವಿದೇಶಕ್ಕೆ ಹೋದರೆ ಅಲ್ಲಿ ಸಿಗುತ್ತಾಳೇನೋ ಅನ್ನೋ ಆಸೆ ಇಂದ GMAT TOEFL ಎಕ್ಸಾಮ್ಸ್ ಬರೆದೆ . UK ನಲ್ಲಿ ಒಂದು ದೊಡ್ಡ ಯುನಿವೆರ್ಸಿಟಿಯಲ್ಲಿ ಸೀಟ್ ಗಿಟ್ಟಿಸಿಕೊಂಡೆ .ಅಲ್ಲಿ ಹೋಗಿ ಚೆನ್ನಾಗಿ  ಓದಿದೆ. ಅವಳು ಸಿಗಲೇ ಇಲ್ಲ. ಓದು ಮುಗಿಯಿತು, ಕೆಲಸ ಸಿಕ್ತು. ಅದೃಷ್ಟ ಅಂದ್ರೆ ನಮ್ಮ ನಾಡಲ್ಲೇ ನನಗೆ ಪ್ರಾಜೆಕ್ಟ್ ಮ್ಯಾನೇಜರ್ ಆಗಿ ಬರುವ ಅವಕಾಶ ಬಂತು. ಒಂದು ಕಡೆ ಪ್ರಿಯ ಸಿಗಬಹುದೇ ಅನ್ನುವ ಕಳವಳ, ಇನ್ನೊಂದೆಡೆ ನಮ್ಮ ಊರು ನಮ್ಮ ಜನ ಅನ್ನೋ ಹಂಬಲ. ಏನು ಮಾಡುವುದೆಂದು ತಿಳಿಯಲಿಲ್ಲ . ಕೊನೆಗೆ ೪ ವರ್ಷಗಳ UK ವಾಸದಿಂದ ಮುಕ್ತಿಗೊಂಡು ಇಲ್ಲಿಗೆ  ಬಂದು ಬಿಟ್ಟೆ. ಇಲ್ಲಿಗೆ ಬಂದಾಗ ನಮ್ಮ ಮಾವ ಅದೇ ಗೋಪಿ ಮಾವ ಹುಡುಗಿಯರ ಲಿಸ್ಟ್ ಹಿಡ್ಕೊಂಡು ನಿಂತಿದ್ರು . ಈಗ ಅದೇ ಲಿಸ್ಟಿನ ಮೊದಲನೇ ಹುಡುಗಿಯ ಮುಂದೆ ನಿಂತಿದ್ದೇನೆ ." ಎಂದು ತನ್ನ ಕಥೆಯನ್ನು ಹೇಳಿಕೊಂಡ .

ಸ್ವಾತಿ :" ಹೇಯ್ ಇದು ರಿಯಲ್ ಸ್ಟೋರಿ ನಾ ? " ಎಂದು ಹೇಳಿ ನಕ್ಕಳು . ಅವಳಿಗೆ ಕ್ರಿಶನ್ ನ ನೇರ ಸ್ವಭಾವ ತುಂಬಾ ಮೆಚ್ಹುಗೆ
ಆಗಿತ್ತು . ಏನೂ ಮುಚ್ಚು ಮರೆ ಇಲ್ಲದೆ ಎಲ್ಲವನ್ನು ಅವಳಲ್ಲಿ ಹೇಳಿಕೊಂಡ ಪರಿ ಅವಳ ಮನ ಗೆದ್ದಾಗಿತ್ತು .

ಕ್ರಿಶನ್ : "ಒಹ್ ಯಾ ರಿಯಲಿ. ಇದು ನನ್ನ ಕಥೆ. ನಿಮಗೆ ನನ್ನ ಮೇಲೆ ಏನ್ ಅಭಿಪ್ರಾಯ ಇದ್ಯೋ ತಿಳಿಸಿ. ಈಗಲೇ ಹೇಳಿ ಅಂತೇನು ಒತ್ತಾಯ ಇಲ್ಲ . ಟೈಮ್ ತೊಗೊಳ್ಳಿ . ನನಗಂತೂ ನೀವು ಇಷ್ಟ ಆಗಿದ್ದೀರಾ ಸ್ವಾತಿ ..." ಎನ್ನುವಷ್ಟರಲ್ಲಿ..

ಕೊಸಲ್ಯ : "ಸ್ವಾತಿ ಆಯಿತಾಮ್ಮಾ ನೀವಿಬ್ಬರು ಮಾತಾಡ್ಕೊಂಡು .. ಗೋಪಿನಾಥ್ ಅವ್ರಿಗೆ ಸಂಜೆ ರಾಗ ಮಂದಿರದಲ್ಲಿ ಸಂಗೀತ ಕಚೇರಿ ಅಟ್ಟೆ೦ಡ್ ಮಾಡಬೇಕಂತೆ " ಮಹಡಿಯ ಮೇಲೆ ಬಂದವರು ಸ್ವಾತಿಯ ಬಳಿ ನಿಂತು ಹೇಳಿದರು .

ಕ್ರಿಶನ್ : " ಒಹ್ ಹೌದು ಗೋಪಿ ಮಾವ ಹೇಳ್ತಿದ್ರು ಸಂಜೆ ಕಾರ್ಯಕ್ರಮ ಇದೆ ಅಂತ . ಬನ್ನಿ ಕೆಳಗೆ ಹೋಗೋಣ ."

ಕೌಸಲ್ಯ ಮುಂದೆ ನಡೆದರು. ಕ್ರಿಶನ್ ಇನ್ನೇನು ಅವರ ಹಿಂದೆ ಹೊರಟಿದ್ದ. ಸ್ವಾತಿ ಅವನ ಕೈ ಹಿಡಿದಳು.

"ಕ್ರಿಶನ್  ನಿಮ್ಮನ್ನ ಮದುವೆಯಾಗಲು ನಾನು ಪುಣ್ಯ ಮಾಡಿದ್ದೇನೆ" ಎಂದು ಹೇಳಿದಳು. ಕ್ರಿಶನ್ ಗೆ ಸಂತಸದ ಮಳೆ  ಸುರಿದಂತಾಯಿತು. ಸ್ವಾತಿಯ ಕೈ ಹಿಡಿದು " ನಿನ್ನ ಎಂದಿಗೂ ಕೈ ಬಿಡುವುದಿಲ್ಲ. ನನ್ನ ಅರ್ಥ ಮಾಡಿಕೊಂಡಿದಕ್ಕೆ ತುಂಬಾ ಥ್ಯಾಂಕ್ಸ್" ಎಂದು ಹೇಳಿ ಇಬ್ಬರು ಕೈಯಲ್ಲಿ ಕೈ ಹಿಡಿದು ಹರ್ಷದ ನಗು ಮುಖದಲ್ಲಿ ಕೆಳಗೆ ಬಂದರು. ಅದನ್ನು ನೋಡಿದ ಗೋಪಿನಾಥ್, ಕೌಸಲ್ಯ ಮತ್ತು ಸಂಪತ್ ರಾಯರು ಖುಷಿಯಿಂದ ಒಬ್ಬರನೊಬ್ಬರು ಅಪ್ಪಿಕೊಂಡರು. ಸಿಹಿಯು ಸ್ವಲ್ಪ ಹೆಚ್ಚಾಗಿಯೇ ತಿಂದರು .

ಗೋಪಿನಾಥ್ : "ಇನ್ನೇನು ಮತ್ತೆ ಹುಡುಗ ಹುಡುಗಿ ಇಬ್ರು ಒಪ್ಪಿದ ಮೇಲೆ ನಮ್ಮದೇನು ಇದೆ ರಾಯರೇ . ಶುಭಸ್ಯ ಶೀಘ್ರಂ ಅಂತ
ದೊಡ್ದವರೇ ಹೇಳಿದ್ದಾರೆ ಅಲ್ವ ."

ಸಂಪತ್ ರಾವ್ : " ನಾಳೆ ಒಳ್ಳೆ ದಿನ ಇದೆ . ನಮ್ಮ ಶಾಸ್ತ್ರಿಗಳ ಹತ್ರ ಹೋಗಿ ಕೇಳಿ ಬರ್ತೀನಿ . ಯಾವಾಗ ಮದುವೆ
ಇಟ್ಟುಕೊಳ್ಳಬಹುದು ಅಂತ "

ಗೋಪಿನಾಥ್ : " ಸರಿ ಹಾಗಿದ್ರೆ . ನಾವಿನ್ನು ಹೊರಡ್ತೀವಿ ರಾಯರೇ . ಕ್ರಿಶನ್ ಈಗ ಸಧ್ಯಕ್ಕೆ ಸ್ವಾತಿನ ಬಿಟ್ಟು ಹೊರಡಬೇಕಪ್ಪಾ . ಮದುವೆ ಮಾಡ್ಕೊಂಡ್ ಮೇಲೆ ಕೈ ಹಿಡಿದು ಕರ್ಕೊಂಡು ಹೋಗು ಅಂತೆ ." ಎಂದು ತಮಾಷೆ ಮಾಡಿದರು .

No comments:

Schoolhouse in the nature~ Fiction

 In a quaint rural village nestled amidst the lush greenery of Karnataka, there stood a small schoolhouse where Teacher Radha imparted knowl...