ಹೊಸ ಚಿಗುರು..

ಬಿದಿರು ಬೊಂಬೆಯಂತೆ ತೂಗಾಡಿ
ಮಲ್ಲಿಗೆಯ ಕಂಪಲ್ಲಿ ತೇಲಾಡಿ
ಬಣ್ಣದ ನವಿಲಂತೆ ಜಿಗಿದಾಡಿ
ನಲಿದು ಕುಣಿಯುವ ಆಸೆ ನನ್ನಲ್ಲಿ

ಅಕ್ಷರದ ದುಂಡಿನ ಗೆರೆಯಾಗಿ
ಪದಗಳಿಗೆ ಅರ್ಥವನು ತುಂಬಿ
ಹಾಡಿನ ಪಲ್ಲವಿಯ ಜೊತೆಯಾಗಿ
ಚರಣದ ಇಂಪಿಗೆ ತಲೆದೂಗಿ
ಪಂಜರದಿಂದ ಹೊರ ಹಾರುವ ಆಸೆ ನನ್ನಲ್ಲಿ

ಮಳೆಯ ಹನಿಯಲಿ ಮೊಗವ ಕಂಡು
ಹೆಣ್ಣಿನ ಚೆಂದದ ಸೌಂದರ್ಯದಿ ಮಿಂದು
ತಂಗಾಳಿಯಲಿ ಅಲೆಯಾಗಿ ಬಂದು
ಚಂದಿರನೆಡೆಗೆ ಎಗರುವ ಯತ್ನವಿಂದು
ಆಸೆಯಾಗಿ ಮೂಡಿದೆ ನನ್ನಲ್ಲಿ

ಶುಭ್ರ ನೀಲಾಗಸದಿ
ಮುದ್ದಾದ ಮೋಡದ ಮರೆಯಲಿ
ನಾಚಿ ನಿಂತು ,ಇಣುಕಿ
ಮುತ್ತಿನಂತ ನಗೆಯ ಬೀರಿ
ಪನ್ನೀರ ಸೂಸಿ
ಹಸಿರ ಹೆಚ್ಚಿಸುವಾಸೆ ನನ್ನಲ್ಲಿ

ದುಂಬಿಯ ನಾದಕೆ ಗುನುಗುನಿಸಿ
ಬೆಳಗಿನ ರವಿಯ ಕಿರಣದಿ
ಚಿಗುರಿದ ಎಲೆಯ ತುದಿಯಲಿ
ಕುಸುಮದ ಪರಾಗ ಸ್ಪರ್ಶದಿ
ಮೊಳಕೆ ಒಡೆದು ಕಣ್ಬಿಡುವಾಸೆ ನನ್ನಲ್ಲಿ

- ಅಶ್ವಿನಿ

Comments

Popular Posts