ಒಂದು ಜೋಡಿ - ಮೊದಲ ನೋಟ! - ಭಾಗ ೪

ಅಂದು ಭಾನುವಾರ. ಮುಂಜಾನೆ ಎದ್ದೊಡನೆ ಮನೆಯೆಲ್ಲಾ ಸುಳಿದಾಡುವಂತೆ ಅಗರಬತ್ತಿಯ ಸುವಾಸನೆ ಹರಡಿತ್ತು. ದೇವರ ಕೋಣೆಯಲ್ಲಿ ಮಲ್ಲಿಗೆಯ ಕಂಪು ಸೂಸುತಿತ್ತು. ಬಾಗಿಲನ್ನು ಮಾವಿನ ತೋರಣ ಅಲಂಕರಿಸಿತ್ತು, ಅಡುಗೆ ಮನೆ ವಿವಿಧ ಭಕ್ಷ್ಯಗಳಿಂದ ತುಂಬಿತ್ತು.

"ವರನ ಕಡೆಯವರು ೧೧ ಘಂಟೆ ಹೊತ್ತಿಗೆ ಬರ್ತಾರಂತೆ. ಎಲ್ಲಾ ಸಿದ್ಧ ಆಯಿತೇನೆ ಕೌಸಲ್ಯಾ?" ಅಂತ ಹಣ್ಣು ತರಲು ಮಾರುಕಟ್ಟೆಗೆ ಹೋಗಿದ್ದ ಸಂಪತ್ ರಾಯರು ಕೇಳುತ್ತಲೇ ಮನೆಯೊಳಕ್ಕೆ ಕಾಲಿಟ್ಟರು.

"ಹ್ಞೂ ರೀ ಎಲ್ಲಾ ರೆಡಿ ಆಗಿದೆ. ನಿಮ್ಮ ಮುದ್ದಿನ ಮಗಳು ಸ್ವಾತಿ ತಯಾರಾಗಿದ್ದಾಳಾ ಅಂತ ನೋಡಿ ಸ್ವಲ್ಪ." - ಎಣ್ಣೆ ಬಾಂಡ್ಲೆಯಿಂದ ಜಿಲೇಬಿ ತೆಗೆಯುತ್ತಿದ್ದ ಕೌಸಲ್ಯ ಉತ್ತರಿಸಿದರು.

ಕೋಣೆಯಲ್ಲಿ ಕಷ್ಟ ಪಟ್ಟು ಸೀರೆ ಉಡುತಿದ್ದ ಸ್ವಾತಿಗೆ ಇದು ಮೊದಲ ವಧು ಪರೀಕ್ಷೆ. ಸಮಯ ೧೦:೩೦ ಆಗಿತ್ತು. ಚಿನ್ನದಲ್ಲಿ ಮುಳುಗಿದ್ದ ಸ್ವಾತಿ ತನ್ನನ್ನು ಕನ್ನಡಿಯಲ್ಲಿ ನೋಡಿಕೊಂಡಾಗ "ನಾನು ಇಷ್ಟು ಸುಂದರವಾಗಿದ್ದೀನಿ ಅಂತ ಈ ದಿನವೇ ನನಗೆ ತಿಳಿದಿದ್ದು" ಎಂದು ಮನದಲ್ಲಿ ಅಂದುಕೊಂಡಳು. ತನ್ನ ಸೌಂದರ್ಯವನ್ನು ಹೊಗಳುತ್ತಾ ಹಣೆ ಮೇಲಿದ್ದ ಬೈತಲೆ ಬೊಟ್ಟನ್ನು ಸರಿಪಡಿಸುತಿದ್ದಳು. ಮನೆಯ ಬಾಗಿಲಲ್ಲಿ ನಿಂತು ಯಾರೋ "ಸಂಪತ್ ರಾಯರೇ .. ಸಂಪತ್ ರಾಯರೇ .. ಮನೆಯಲ್ಲಿ ಇದ್ದೀರಾ ?? " ಅಂತ ಕರೆದ ದ್ವನಿ ಸ್ವಾತಿಯ ಕಿವಿಗೆ ಬಿತ್ತು. ರಾಯರು ಬಾಗಿಲ ತೆಗೆದು ಬಂದ ಅತಿಥಿಯರನ್ನು ಮನೆಯೊಳಕ್ಕೆ ಆಹ್ವಾನಿಸಿದರು.

ಸಂಪತ್ ರಾವ್: "ಬನ್ನಿ ಗೋಪಿನಾಥ್. ಮನೆ ಸುಲಭವಾಗಿ ಸಿಗ್ತಲ್ವಾ? ತೊಂದರೆಯೇನು ಆಗಲಿಲ್ಲ ಅಂತ ಅ೦ದುಕೊಳ್ತೀನಿ ."

ಗೋಪಿನಾಥ್: ಅಯ್ಯೋ ಅರಾಮಾಗೆ ಬಂದ್ವಿ. ನಮ್ಮ ಹುಡುಗ ಇದೆ ಊರಲ್ಲಿ ಕೆಲಸ ಮಾಡ್ಕೊಂಡಿರೋದಲ್ವಾ, ಹಾಗಾಗಿ ಏನೂ ತೊಂದರೆ ಆಗಿಲ್ಲ .ಎಲ್ಲಿ ನಿಮ್ಮ ಶ್ರೀಮತಿಯವರು ಕಾಣಿಸ್ತಾ ಇಲ್ಲಾ?

ಸಂಪತ್ ರಾವ್ : "ಕೌಸಲ್ಯ , ನೋಡೇ ಗೋಪಿನಾಥವರು ಬಂದಿದ್ದಾರೆ... ಇಲ್ಲೇ ಅಡಿಗೆಮನೆಯಲ್ಲಿ ಇದ್ದಾಳೆ ಬರ್ತಾಳೆ.  ನಿಮಗೆ ಕುಡಿಯೋಕ್ಕೆ ಶರಬತ್ತು ... ಕಾಫಿ ಚಹಾ.. ಏನ್ ತೊಗೊಳ್ತೀರಾ?"

ಗೋಪಿನಾಥ್ : "ರಾಯರೇ ಉಪಚಾರಗಳೆಲ್ಲಾ ಏನೂ ಬೇಡ. ಒಂದು ಲೋಟ ನೀರು ಕೊಡಿ ಸಧ್ಯಕ್ಕೆ. ಭಯಂಕರ ಬಿಸಿಲು ಹೊರಗೆ. ಮಳೆ ಸೂಚನೆಯೇ ಇಲ್ಲಾ ಅಂತೀನಿ. ಈ ಮಲಿನ ಪೀಡಿತ ನಗರ ಬೇರೆ ."

ಕೌಸಲ್ಯ: ಸೆರಗು ಸರಿ ಮಾಡಿಕೊಳ್ಳುತ್ತ "ಫ್ರಿಡ್ಜ್ ನೀರು ತರಲಾ? ತಣ್ಣಗೆ ಇರುತ್ತೆ" ಎಂದು ಕೇಳಿದರು.

ಗೋಪಿನಾಥ್: "ನಂಗೆ ಫ್ರಿಡ್ಜ್ ನೀರು ಬೇಡ ತಾಯಿ. ಗಂಟಲು ನೋವು ಇದೆ. ಮಾಮೂಲಿ ನೀರೆ ತನ್ನಿ"

ಕೌಸಲ್ಯ: "ಸರಿ ಒಂದು ನಿಮಿಷ ತರ್ತೀನಿ. ರೀ ಫ್ಯಾನ್ ಸ್ವಿಚ್ ಆನ್ ಮಾಡಿ. ಪಾಪ ಅವರಿಗೆ ಈ ಊರಿನ ಬಿಸಿಲು ಹೊಸದು. ತುಂಬಾ ಸೆಖೆ ಆಗ್ತಿರಬೇಕು"

ಸಂಪತ್ ರಾವ್ ಫ್ಯಾನ್ ಸ್ವಿಚ್ ಆನ್ ಮಾಡಿ ಗೋಪಿನಾಥ್ ನವರ ಪಕ್ಕದಲ್ಲಿದ್ದ ಕುರ್ಚಿಯ ಮೇಲೆ ಕುಳಿತರು. "ಮತ್ತೆ ಎಲ್ಲಿ ಕೆಲಸ ಮಾಡ್ತಿರೋದಪ್ಪಾ ನೀವು? ಆಫೀಸ್ ಎಲ್ಲಿ ಇದೆ? " ಎಂದು ಕ್ರಿಶನ್ ನ ಕೇಳಿದರು.

ಕ್ರಿಶನ್: "ನಾನು "ಅಕ್ರೊಶಿಯ ಬೋನ್ಜ್ಅವರ್ ಅಂ ಸಿಸ್ಟೆಮ್ಸ್" ಅನ್ನೋ MNC ಯಲ್ಲಿ ಕೆಲಸ ಮಾಡ್ತಾ ಇದ್ದೀನಿ. ಇಲ್ಲೇ ಸರೋವರ ನಗರದಲ್ಲಿ ೩ ನೆ ಬ್ಲಾಕ್ನಲ್ಲಿ ಸೆಂಟ್ರಲ್ ಮಾಲ್ ಇದ್ಯಲ್ಲಾ, ಅದರ ಎದುರು ಒಂದು ದೊಡ್ಡ ಗ್ಲಾಸ್ ಬಿಲ್ಡಿಂಗ್ ಇದೆ ನೋಡಿ,  ಅದರ ೨ ನೆ ಫ್ಲೋರ್ ನಲ್ಲಿ ನಮ್ಮ ಆಫೀಸ್ ಇರೋದು."

ಸಂಪತ್ ರಾವ್: "ಒಹ್ ಆ ಗಾಜಿನ ಬಿಲ್ದಿ೦ಗಾ . ಗೊತ್ತಾಯಿತು ಬಿಡಿ. ಮನೆಗೆ ಕ್ಯಾಬ್ ಬರುತ್ತಾ? ಟೈಮಿಂಗ್ಸ್ ಏನು ?"

ಕೌಸಲ್ಯ ನೀರು ತಂದು ಕೊಟ್ಟು ಅಲ್ಲೇ ಸಂಪತ್ ರಾಯರ ಹಿಂದೆ ನಿಂತರು.

ಕ್ರಿಶನ್ ಮನದೊಳಗೆ " ಅಯ್ಯೋ ಇವರೇನು ನನ್ನ ಇಂಟೆರೋಗೇಶನ್ ಮಾಡ್ತಾ ಇದ್ದಾರೋ ಇಲ್ಲಾ ಇಂಟರ್ವ್ಯೂ ಮಾಡ್ತಾ ಇದ್ದಾರೋ ?" ಎಂದು ಯೋಚಿಸಿ "ನಮ್ಗಳಿಗೆ ಬೆಳಿಗ್ಗೆ ಆಫೀಸಿಗೆ ಹೋಗೋ ಟೈಮಿಂಗ್ ಫಿಕ್ಸ್ ಆದ್ರೂ ಅಲ್ಲಿಂದ  ಹೊರಡುವ ಟೈಮಿಂಗ್ಸ್ ಗೊತ್ತಿರೋದಿಲ್ಲ. ಸಧ್ಯಕ್ಕೆ ಕಾಬ್ಸ್ ಫ್ಯಸಿಲಿಟಿ ಇದೆ. ಆದ್ರೆ ಅದೇನೋ ಕಾಸ್ಟ್- ಕಟ್ಟಿಂಗ್ ಅನ್ನೋ ಭೂತ ಹಿಡ್ಕೊಂಡಿದೆ ನಮ್ಮ CEO ಗೆ . ಹಾಗಾಗಿ ಇನ್ನೆರಡು-ಮೂರು ತಿಂಗಳಲ್ಲಿ ಮಾರ್ಕೆಟ್ ರೆಸೆಶನ್ ಗೆ ಒಳಗಾದರೆ ನಾವು ಬಸ್ ನಲ್ಲಿ ಓಡಾಡಬೇಕಾಗುತ್ತೆ, ಇಲ್ಲಾ ನಮ್ಮ ಸ್ವಂತ ವಾಹನದಲ್ಲಿ ಹೋಗಬೇಕಾಗುತ್ತೆ"

ಸಂಪತ್ ರಾವ್: "ಒಹ್ ಸರಿ ಸರಿ."

ಪ್ರಶ್ನೆಗಳ ಸುರಿಮಳೆಯೇ ಆಗುತಿದ್ದಾಗ ತಾನಿದ್ದ ಕೋಣೆಯ ಬಾಗಿಲಿನ ಬದಿಯಿಂದ ಕತ್ತು ಹೊರ ಹಾಕಿ ಇಣುಕುತ್ತಾ ಸ್ವಾತಿ ಕ್ರಿಶನಿನ ಮಾತುಗಳನ್ನು ಕೇಳುತ್ತಿದ್ದಳು. ಅವನ ಧ್ವನಿಗೆ ಅವಳು ಸೋತಾಗಿತ್ತು. ಕಪ್ಪು ಕಂಗಳು, ಆಗ ತಾನೇ ಶಾಂಪೂ ಮಾಡಿದ್ದ ರೇಷ್ಮೆಯಂತಹ ಕೂದಲಿಗೆ ಸ್ವಾತಿ ಕ್ಲೀನ್ ಬೋಲ್ಡ್ ಆಗಿದ್ದಳು.


ಸಂಪತ್ ರಾಯರಿಗೂ ಗೋಪಿನಾಥ್ ರವರಿಗೂ ಸುಮಾರು ೧೦ ವರ್ಷದ ಪರಿಚಯ. ಇಬ್ಬರೂ ಮಹಾರಾಷ್ಟ್ರದ ಶೋಲಾಪುರದಲ್ಲಿ ಒಟ್ಟಿಗೆ ಎರಡು ವರ್ಷಗಳ ಕಾಲ ಕೆಲಸ ಮಾಡಿದ್ದರು. ಬ್ಯಾಂಕ್ ಉದ್ಯೋಗಿಗಳಾದ್ದರಿಂದ ಇಬ್ಬರಿಗೂ ಟ್ರಾನ್ಸ್ ಫರ್ ಆಗುತ್ತಲೇ ಇತ್ತು, ಆದರು ಅಲ್ಲಿಂದ ಬೇರೆ ಕಡೆಗೆ ವರ್ಗವಾದಮೇಲೂ, ಮೊದಲು ಪತ್ರದ ಮೂಲಕ ಸಂಪರ್ಕದಲ್ಲಿದ್ದರು, ನಂತರ ಈ ದೂರವಾಣಿ , ಸೆಲ್ ಫೋನ್ಗಳ ಯುಗ ಬಂದ ಮೇಲೆ ಆಗಾಗ ಫೋನ್ ಮಾಡುತ್ತಿದ್ದರು.

ಮಾತು ಶೋಲಾಪುರ್, ಬ್ಯಾಂಕ್ , ಅಲ್ಲಿಯ ಜಿಪುಣ ಮ್ಯಾನೇಜರ್ ನತ್ತ ಸರಿಯಿತು. ಕ್ರಿಶನ್ ಗೆ ಸ್ವಲ್ಪ ನೆಮ್ಮದಿ ಆಯಿತು. ಕಾಲೇಜಿನಲ್ಲಿ ಓರಲ್ ಇಂಟರ್ವ್ಯೂ ಕೊಟ್ಟ ಮೇಲೆ ಇಂದೇ ಅವನು ಅಂತಹ ಇಂಟರ್ವ್ಯೂ ಎದುರಿಸಿದ್ದು ಲೈಫ್ ನಲ್ಲಿ ಎ೦ದೆನಿಸಿತ್ತು. ಹಿರಿಯರು ಮಾತಿನಲ್ಲಿ ಮಗ್ನರಾಗಿದ್ದಾಗ, ಕ್ರಿಶನ್ ಮನೆಯ ಗೋಡೆ ಮೇಲಿದ್ದ ಪ್ರಶಸ್ತಿ ಪತ್ರಗಳು, ಫಲಕಗಳನೆಲ್ಲಾ ಒಂದು ಕಡೆಯಿಂದ ವೀಕ್ಷಿಸುತ್ತಾ ಬಂದ. ಅವನ ದೃಷ್ಟಿ ಬಾಗಿಲ ಸಂಧಿಯಲ್ಲಿ ಇಣುಕುತಿದ್ದ ಹಸನಾದ, ಅಪ್ಸರೆಯಂತಹ ಮೊಗದ ಮೇಲೆ ಬಿತ್ತು. ಅದೇನೋ ಸೆಳೆತ, ಅದೇನೋ ಆಕರ್ಷಣೆ ಅವಳಲ್ಲಿತ್ತು. ಸ್ವಾತಿಗೆ ಕ್ರಿಶನ್ ತನ್ನನ್ನು ನೋಡುತ್ತಿರುವುದಾಗಿ ತಿಳಿದು, ನಾಚಿ ಒಳ ಓಡಿ ಕನ್ನಡಿಯ ಮುಂದೆ ನಿಂತಳು. ಮನಸಿನಲ್ಲಿ ಒಂದೆಡೆ ಸಂತಸ, ಒಂದೆಡೆ ಭಯ ಎರಡೂ ಮಿಶ್ರಿತಗೊಂಡು ಕೈ ಕಾಲು ತಣ್ಣಗಾಗಿತ್ತು. ತುಟಿಗಳು ನಗುವಿನಿಂದ ಅರಳಿ ನಡುಗುತಿತ್ತು. ಆಗ ..


ಮುಂದಿನ ಸಂಚಿಕೆಯಲ್ಲಿ

No comments:

Schoolhouse in the nature~ Fiction

 In a quaint rural village nestled amidst the lush greenery of Karnataka, there stood a small schoolhouse where Teacher Radha imparted knowl...