ಒಂದು ಜೋಡಿ - ಸಮಾಗಮ! ಭಾಗ ೫

ಗೋಪಿನಾಥ್: "ಎಲ್ಲಿ ನಿಮ್ಮ ಮಗಳು ಸ್ವಾತಿ.ಮನೆಯಲ್ಲೇ ಇದ್ದಾಳೆ ಅಲ್ವ.ಕರೀರಿ. ಫಾರ್ಮಾಲಿಟೀಸ್ ಎಲ್ಲಾ ಏನೂ ಬೇಡ."

ಸಂಪತ್ ರಾವ್: "ಒಹ್ ಮನೆಯಲ್ಲೇ ಇದ್ದಾಳೆ. ಕೌಸಲ್ಯ ಸ್ವಾತಿನ ಕರ್ಕೊಂಡು ಬಾ."

ಕೌಸಲ್ಯ ಸ್ವಾತಿಯ ಕೋಣೆಗೆ ಹೋಗಿ "ಬಾರೆ, ಹೊರಗೆ ಗೋಪಿ ಮಾವ, ಕ್ರಿಶನ್ ಬಂದಿದ್ದಾರೆ. ಹುಚ್ಚುಚ್ಚಾಗಿ ಆಡಬೇಡ" ಅಂತ ಬುದ್ದಿ ಹೇಳುತ್ತಾ ಸ್ವತಿಯನ್ನ ನಡುಮನೆಯಲ್ಲಿದ್ದ ಸೋಫಾದ ಮೇಲೆ ಕೂರಿಸಿದರು . ನವಿಲಿನ ಬಣ್ಣದ ನೀಲಿಯ ಸೀರೆ ಅವಳ ಬಿಳಿ ಮೈ ಬಣ್ಣಕ್ಕೆ ಒಪ್ಪುವಂತೆ , ಉದ್ದ ಜಡೆಯ ತುಂಬಾ ಮಲ್ಲಿಗೆ ಸುತ್ತಿರಲು ಆಗಲೇ ಮದುವೆಗೆ ಸಿದ್ದವಾಗಿ ಕುಳಿತಂತಿತ್ತು . ಕ್ರಿಶನ್ ಅವಳ ಸೌಂದರ್ಯಕ್ಕೆ ಮರುಳಾಗಿ ಕುಳಿತಿದ್ದ . ಪ್ರಿಯಾಳ ಕಥೆಯ ನಂತರ  ಅವನ ಜೀವನದಲ್ಲಿ ಒಂದು ಹುಡುಗಿಯ ಬಗ್ಗೆ ಈ ರೀತಿಯ ಭಾವನೆ ಮನಸಲ್ಲಿ ಹುಟ್ಟಿದ್ದು ಇದೆ ಮೊದಲಾಗಿತ್ತು . ೫ ವರ್ಷ ಕಳೆದರು ಪ್ರಿಯಾಳ ಛಾಯೆ ಅವನ ಹೃದಯದಿಂದ ಬಿಚ್ಚಿ ಎಸೆಯಲಾಗಿರಲಿಲ್ಲ . ಆದರೆ ಆ ಕಹಿಯು ಅವನ ಮುಂದಿನ ಸಿಹಿ ಗೆ ಅಡ್ಡಿಯಾಗಲು ಅವಕಾಶ ಕೊಡಬಾರದೆಂದು ನಿರ್ಧರಿಸಿದ್ದನು .

ಗೋಪಿನಾಥ್ : "ನೋಡೋ ಕ್ರಿಶನ್ ಇವಳೇ ಸ್ವಾತಿ . ಸಂಪತ್ ರಾಯರ ಒಬ್ಬಳೇ ಪುತ್ರಿ . ನೀನು ಶೋಲಾಪುರ್ ಗೆ ಬಂದಾಗ ಇವಳು  ನಾಲ್ಕೋ ಐದನೆಯೋ ತರಗತಿಯಲ್ಲಿ ಓದುತ್ತಿದ್ದಳು . ಪುಟ ಪುಟ ಅಂತ ನಮ್ಮ ಮನೆಗೆ ಬೆಳಿಗ್ಗೆ ಹಾಲು ತೆಗೆದುಕೊಂಡು
ಹೋಗಲು ಬರುತಿದ್ದಳು . ನೆನಪಾಯಿತಾ ಯಾರು ಅಂತ ."


ಕ್ರಿಶನ್ :"ಒಹ್ ಆ ಹುಡುಗಿ ಇವಳೇನಾ ? ಹೈ ಸ್ವಾತಿ . ನಂಗೆ ಗೊತ್ತಿರಲಿಲ್ಲ ನಾನು ಇವತ್ತು ನಿಮ್ಮನ್ನ ನೋಡಲು ಬರ್ತಾ ಇರೋದು ಅಂತ ."

ಸ್ವಾತಿ : ತುಸು ನಗು ಬೀರುತ್ತ "ಹೈ ಕ್ರಿಶನ್ ." ಎಂದು ಮೆಲ್ಲನೆಯ ಧ್ವನಿಯಲ್ಲಿ ಹೇಳಿದಳು .

ಗೋಪಿನಾಥ್ : " ರಾಯರೇ ಈಗಿನ ಜೆನರೇಶನ್ ಹುಡುಗರು. ನಿಮ್ಮ ಅಭ್ಯಂತರ ಇಲ್ಲ ಅಂದ್ರೆ ಇವರಿಬ್ಬರು ಏನಾದ್ರೂ
ಮಾತಾಡ್ಕೊಳ್ಳೋದು ಇದ್ರೆ ...?"


ಸಂಪತ್ ರಾವ್ : " ಓಹೋ ಅದಕ್ಕೇನಂತೆ . ಸ್ವಾತಿ ಕ್ರಿಶನ್ ಅವರನ್ನು ಮಹಡಿಗೆ ಕರೆದು ಕೊಂಡು ಹೋಗಮ್ಮ . ಅಲ್ಲಿ ಉಯ್ಯಾಲೆ ಮೇಲೆ ಕುಳಿತು ಮಾತಾಡಬಹುದು . ನೋ ಪ್ರಾಬ್ಲಮ್ "

ಕೌಸಲ್ಯ ಅವರಿಬ್ಬರಿಗೆ ಮಹಡಿಯ ಕಡೆ ಹೋಗಲು ದಾರಿ ಮಾಡಿ ಕೊಟ್ಟರು . ಸ್ವಾತಿ ಮುಂದೆ ನಡೆದಳು . ಕ್ರಿಶ್ ಅವಳ ಹಿಂದೆ ಒಂದೊಂದೇ ಮೆಟ್ಟಿಲನ್ನು ಹತ್ತುತ್ತಾ ಗೆಜ್ಜೆ ನಾದದ ಇಂಪನ್ನು ಸವಿದನು .

ಸ್ವಾತಿ : "ಕೂತ್ಕೊಳ್ಳಿ ಕ್ರಿಶ್.. ಕ್ರಿಶನ್ ."

ಕ್ರಿಶನ್ : "ಒಹ್ ..ನೀವು ಕ್ರಿಶ್ ಅಂತಾನೆ ಕರಿಬಹುದು . ದಟ್ ಇಸ್ ಮೈ ಒಫೀಶಿಯಲ್ ನೇಮ್. ಅದು ಹಾಗೆ ಇರಲಿ, ನಿಮಗೆ ಯಾರಾದ್ರೂ ಪನಿಷ್ಮೆಂಟ್ ಕೊಟ್ಟಿದ್ದಾರಾ?"

ಸ್ವಾತಿ :"ಇಲ್ಲ ಯಾಕೆ "

ಕ್ರಿಶನ್ : "ಬನ್ನಿ ಮತ್ತೆ . ಇಲ್ಲಿ ಜಾಗ ಇದೆ . ಕೂತ್ಕೊಳ್ಳಿ ."

ಸ್ವಾತಿ ನಾಚುತ್ತಲೇ ಉಯ್ಯಾಲೆಯ ಒಂದು ಬದಿಯಲ್ಲಿ ಕುಳಿತಳು .

ಕ್ರಿಶನ್ :"ಸೊ ನೀನು ವರ್ಕ್ ಮಾಡ್ತಾ ಇರೋದು ಇಂಪ್ರೆಸ್ಸಿವ್ ಸಾಫ್ಟ್ವೇರ್ ನಲ್ಲಿ ಅಂತ ಕೇಳಿದ್ದೀನಿ . ಹೇಗಿದೆ ಕೆಲಸ ?"

ಸ್ವಾತಿ ಮನದಲ್ಲೇ  ಏನ್ ಹುಡುಗರೋ ಈ ಕಾಲದಲ್ಲಿ ಕೆಲಸ ಬಿಟ್ರೆ ಬೇರೆ ಏನೂ ಟಾಪಿಕ್ ಸಿಗ್ಲಿಲ್ವಾ ಮಾತಾಡೋಕೆ ಅಂತ ಯೋಚಿಸುತ್ತ ತಲೆಯ ಮೇಲೆ ಕೈನಿಂದ ಮೆದುವಾಗಿ ಮೊಟಕಿಕೊಂಡು "ಒಹ್ ಫುಲ್ ಡೀಟೇಲ್ಸ್ ಸಿಕ್ಕಿದೆ ನನ್ ಬಗ್ಗೆ ಅನ್ಸತ್ತೆ . ಹ್ಞೂ ಕೆಲಸ ಏನೋ ಪರವಾಗಿಲ್ಲ . ನಡೀತಾ ಇದೆ . ಸಾಫ್ಟ್ವೇರ್ ಅಂದ್ರೆ ನಿಮಗೇನು ಹೊಸದಾಗಿ ಹೇಳೋ ಅವಶ್ಯಕತೆ ಇಲ್ಲ ಅಂತ ಅಂದು ಕೊಳ್ತೀನಿ . ನೀವು  ಅದೇ ಲೈನ್ ನಲ್ಲಿ ಇರೋದಲ್ವ .?" ಎಂದುತ್ತರಿಸಿದಳು .

ಕ್ರಿಶನ್ : ಮಂದಹಾಸ ಬೀರುತ್ತಲೇ "ನೀವು ನನ್ನ ಬಗ್ಗೆ ಸಾಕಷ್ಟು ರಿಸರ್ಚ್ ಮಾಡಿರೋ ಹಾಗಿದೆ ."

ವಾತಾವರಣ ಹಸನಾಗಿತ್ತು .ಇಬ್ಬರು ಜೋರಾಗಿ ನಕ್ಕರು .ಅಲ್ಲೇ ಇದ್ದ ಗೋಡೆಯ ಮೇಲೆ ಒಂದು ಫೋಟೋ ಕ್ರಿಶನಿನ ಕಣ್ಣಿಗೆ ಬಿತ್ತು.

ಕ್ರಿಶನ್ : " ಸ್ವಾತಿ ಅದು ನೀನು ಶೋಲಾಪುರ್ನಲ್ಲಿದ್ದಾಗ ತೇಗದ ಫೋಟೋ ಇರ್ಬೇಕು ಅಲ್ವ . ಸ್ಕೂಲ್ ಯುನಿಫಾರ್ಮ್
ನಲ್ಲಿ ಹಸುವಿನ ಜೊತೆ ನಿಂತಿದ್ಯಲ್ಲ . ಇಟ್ಸ್ ನೈಸ್ . ಅದು ಕಾವೇರಿ ಅಲ್ವ - ನಿನ್ನ ಫ್ರೆಂಡ್ . ಅವಳು ಎಲ್ಲಿದ್ದಾಳೆ ಈಗ ?"


ಸ್ವಾತಿ : "ಅಬ್ಬ ನಿಮ್ಮ ಮೆಮೊರಿ ತುಂಬಾ ಶಾರ್ಪ್ ಇದೆ ರೀ .. ಹ್ಞೂ ಕಾವೇರಿ ಅದು . ಅವಳು ಏಳನೆಯ ತರಗತಿಯ ವರೆಗೆ ನನ್ನ
ಜೊತೆಗೆ ಶಾಲೆಗೆ ಬರುತಿದ್ದಳು . ನಂತರ ಅವಳ ತಂದೆಗೆ
ವರ್ಗಾವಣೆ ಆಯಿತು . ಚೆನ್ನೈ ನಲ್ಲಿ ಇದ್ದಾಗ ಅಲ್ಲಿಂದ ಒಂದೆರಡು ಪತ್ರ ಬರೆದಿದ್ಲು. ನಾವು ಈ ಊರಿಗೆ ಬಂದ ಮೇಲೆ ಅವಳಿಗೆ ಪತ್ರ ಬರೆದರೂ ಉತ್ತರ ಬರಲಿಲ್ಲ . ಹಾಗಾಗಿ ಅವಳು ಸಧ್ಯಕ್ಕೆ ಟಚ್ ನಲ್ಲಿ ಇಲ್ಲ . ... ಇನ್ನು ಸುಮಾರು ಫೋಟೋಸ್ ಇದೆ . ನಿಮಗೆ ನೆನಪಿರಬೇಕು , ನಾವು ಆಟದ ಮೈದಾನದಲ್ಲಿ ಲಗೋರಿ ಆಡುತಿದ್ದಾಗ ಪ್ರೇಮಕ್ಕ ಬಂದು ಒಂದೆರಡು ಫೋಟೋ ತೆಗೆದಿದ್ದಳು "


ಕ್ರಿಶನ್ : "ಹ್ಞೂ ಹೌದಲ್ಲ . ನೆನಪಿದೆ .ಕೆಳಗೆ ಹೋದ ಮೇಲೆ ಆ ಫೋಟೋಸ್ ನೋಡ್ತೀನಿ ."

ಇಬ್ಬರ ಯೋಚನೆ , ಹಾಸ್ಯ ಮಾಡುವ ಧಾಟಿ , ಇಷ್ಟಗಳು ಎಲ್ಲಾ ಸಮನಾಗಿತ್ತು . ಆದ್ರೆ ಕ್ರಿಶನ್ ಸ್ವಾತಿಗೆ ಅವನ ಹಿಂದಿದ್ದ ಒಂದು ಕಥೆಯನ್ನ ಹೇಳಲು ಚಡಪಡಿಸುತಿದ್ದ. ಅವನಿಗೆ ಸ್ವಾತಿ ಹಿಡಿಸಿದ್ದಳು ಆದರೆ ಆ  ಒಂದು ಸತ್ಯವನ್ನು ಕತ್ತಲಲ್ಲಿ ಮುಚ್ಚಿಡಲು ಇಷ್ಟ ಪಡಲಿಲ್ಲ .

ಕ್ರಿಶನ್ : ಸ್ವಾತಿ ನಿನ್ನ ಹತ್ರ ಒಂದು ಗಂಭೀರದ ವಿಷ್ಯ ಮಾತಾಡಬೇಕು .

ಸ್ವಾತಿ : ಏನ್ ಹೇಳಿ ಕ್ರಿಶನ್ .

ಮುಂದಿನ ಸಂಚಿಕೆಯಲ್ಲಿ ...

No comments:

Check!

LinkWithin

Related Posts Plugin for WordPress, Blogger...