ಹೀಗೊಂದು ಭಾನುವಾರ!

ಅಂದು ಭಾನುವಾರ,  ಮ‌0ಡ್ಯ‌ದ‌ಲ್ಲೊ0ದು  ಮದುವೆ ಸಂಭ್ರಮವಿತ್ತು. ಅದರಲ್ಲಿ ಪಾಲ್ಗೊಳ್ಳಲು ಹೊರಟ ನಾವು ತಲುಪಿದ್ದು ಮೇಲುಕೋಟೆ.

ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿ ಇರೋ ಎಲ್ಲ ಕಲ್ಯಾಣ ಮಂಟಪದಲ್ಲೂ ಒಂದಲ್ಲ ಒಂದು ಮದುವೆ ಅಥವಾ ಮುಂಜಿ ಕಾರ್ಯ ನಡೆಯುತ್ತಿತ್ತು. ಎಲ್ಲೆಡೆ ಸಡಗರ ತುಂಬಿತ್ತು. ರೋಡಿನುದ್ದಕ್ಕೂ ವಾಹನಗಳಲ್ಲಿ ಕುಳಿತ ರಮಣಿಯರು ಮೈತುಂಬ ಒಡವೆ , ಜರತಾರಿ ಸೀರೆ ಧರಿಸಿದ್ದರು. ಆ ಹನ್ನೊಂದು ಘಂಟೆಯ ಉರಿಬಿಸಿಲನ್ನೂ ಕಡೆಗಣಿಸಿ ಇಂತಹ ಭಾರಿ ಸೀರೆಗಳನ್ನ ಉಟ್ಟಿದ್ದಾದರು ಹೇಗೆ ಎಂಬ ಪ್ರಶ್ನೆ ನನ್ನ ಮನದಲ್ಲಿ. ಇನ್ನು ಅವರ ಸಾರಥಿಗಳೋ (ಅಂದ್ರೆ ಅವರ ಗಂಡಂದಿರು) ಯಾವ ಎಂ. ಪಿ , ಎಂ ಎಲ್ ಎ ಗೇನು ಕಡಿಮೆ ಇರ್ಲಿಲ್ಲ . ಏನು ಇಲ್ಲ ಅ೦ದ್ರೂನು ಕೈನಲ್ಲಿ ೬ -೭ ಗಟ್ಟಿ ಚಿನ್ನದ ಉಂಗುರ, ೧-೨  ಸವರನಿನ ಬ್ರೇಸ್ಲೇಟ್ , ದಪ್ಪದಾದ ಕತ್ತಿನ ಚಿನ್ನದ ಚೈನ್ ಪಳ ಪಳ ಅಂತ ಹೊಳೆಯುತ್ತ ಇದ್ದವು. ಹಾಗು ಹೀಗೂ ಮಂಡ್ಯ ತಲುಪೋ ಹೊತ್ತಿಗೆ 12:00 ಘಂಟೆ ದಾಟಿತ್ತು. ಇನ್ನೂ ಮಂಟಪಕ್ಕೆ ಹೋಗಿ ವಧು ವರರಿಗೆ ಹರಸಿ ನಂತರಾ ಪಂಕ್ತಿ ಊಟಕ್ಕೆ ಕಾದು ... ಅಯ್ಯೋ ಅಷ್ಟೋಂಡು ತಾಳ್ಮೆ ನಮಗಿರಲಿಲ್ಲ. ಅದು ಆ ಉರಿಬಿಸಿಲಿನಲ್ಲಿ. ಸರಿ, ಎಲ್ಲಾ  ಪಯಣಿಗರ ಒಮ್ಮತ ಪಡೆದು ಬಂಡಿ ಬಲಕ್ಕೆ ತಿರುಗಿಸಿಯೇಬಿಟ್ಟರು  ನಮ್ಮ ಸಾರಥಿ ಭಾವಮೈದ.

ಸುಮಾರು ೪೦ ಕಿ. ಮೀ  ದೂರದಿಲ್ಲಿತ್ತು ಯೋಗನರಸಿಂಹನ ಗುಡಿ - ಅದು ಬೆಟ್ಟದ ಮೇಲೆ, ಬೆಟ್ಟದ ಕೆಳಗೆ ಚೆಲುವನಾರಾಯಣ ಸ್ವಾಮಿಯ ಸನ್ನಿಧಿ. ತಡವಾಗಿ ಬಂದಿದ್ದರಿಂದ ಮೊದಲಿಗೆ ಬೆಟ್ಟ ಹತ್ತಿ ನರಸಿಂಹ ಸ್ವಾಮಿ ಕೃಪೆಗೆ ಈಡಾದೆವು ..ಸಮಯ ೨  ಮೀರಿತ್ತು, ಹೊಟ್ಟೆ ತಾಳ ಹಾಕ್ತಿತ್ತು. ಸುಬ್ಬಣ್ಣ ಮೆಸ್ಸ್ ಗೆ ದಾರಿ ಅಂತ ಒಂದು ಫಲಕ ಕಣ್ಣಿಗೆ ಬಿತ್ತು. ಯಾರೋ ತಿಳಿಸಿದ್ರು ಈ  ಮೆಸ್ನಲ್ಲಿ ಪ್ರಸಾದ ತುಂಬಾ ಚೆನ್ನಾಗಿರುತ್ತೆ ಅಂತ. ಸರಿ ಅಲ್ಲಿಯೇ ಹೊರಟೆವು. ಇವತ್ತಿಗೂ ಸುಬ್ಬಣ್ಣ ಮೆಸ್ಸ್ ನೆನೆದು ಒಮ್ಮೆ  ಕೈ ಮೂಗಿಗೆ ಇಟ್ರೆ ತುಪ್ಪದ ಪರಿಮಳ ಬರತ್ತೆ ಅಷ್ಟು ರುಚಿಯಾಗಿತ್ತು. ಇಂದಿಗೂ ಮರೆಯಲು ಸಾಧ್ಯವಿಲ್ಲ ಅಂತಹ ರುಚಿ. ಮನತೃಪ್ತಿಯಾಯಿತು. ಮುಂದೆ ಚೆಲುವನಾರಾಯಣ ಸ್ವಾಮಿ ಗುಡಿಗೂ ಭೇಟಿ ಆಯಿತು.ದರ್ಶನ ಭಾಗ್ಯ ಆಗಿ ಬಂಡಿ ಏರಿ ಮನೆಯತ್ತ ಹೊರಟಾಗ ನಮ್ಮ ಹಾದಿಯಲ್ಲಿ ಕಾವಲು ಕಂಡಿತು , ಒಂದು  - ಮಂಡ್ಯ ಮೇಲಾಗಿ ಬೆಂಗಳೂರು, ಮತ್ತೊಂದು - ೨೦ ಕಿ.ಮೀ.  ಶ್ರವಣಬೆಳಗೊಳ .. ಜೈ ಬಾಹುಬಲಿ ಎಂದು ಮುಂದಿನ ಪಯಣ ಸಾಗಿತು ಕಲ್ಲಿನ ಬೃಹತ್ ಗೊಮ್ಮಟನ ಊರಿಗೆ. 

ಇಡೀ ಜಗತ್ತಿನಲ್ಲೇ ಅತಿ ಎತ್ತರದ ಏಕಶಿಲೆಯ ಪ್ರತಿಮೆ ಎಂದೇ ಪ್ರಸಿದ್ಧಿ ಪಡೆದಿರುವ ಹಾಸನ ಜಿಲ್ಲೆಯ ಈ ಗೋಮಟೇಶ್ವರನ ಸನ್ನಿದಿಗೆ ಇದೇ ಮೊದಲ ಬಾರಿಗೆ ನಮ್ಮ ಹಾಜರಿ. ೫೮ ಅಡಿ ಎತ್ತರದ ಈ ಬೃಹತ್ ಬಾಹುಬಲಿಯಲ್ಲಿ ಅದೇನೋ ಸೆಳೆತ, ಆಕರ್ಷಣೆ. ವಿಂಧ್ಯಗಿರಿ ಕಲ್ಲಿನ ಗುಡ್ಡದ ಮೇಲೆ ನಿಂತಿರುವ ಈ ಬಾಹುಬಲಿಗೆ ೧೨ ವರ್ಷಕೊಮ್ಮೆ ಮಹಾಮಸ್ತಾಭಿಷೇಕ ನಡೆಯುತ್ತದೆ. ಭಕ್ತಾದಿಗಳು ನೀರಿನಿಂದ ಅಭೋಷೇಕ ಮಾಡಿದ ನಂತರ ಹಾಲು, ಕಬ್ಬಿನ ಹಾಲು ,ಕೇಸರಿಯಿಂದ ಅಭಿಷೇಕ ಮಾಡಲಾಗುವುದು.  ಸುಮಾರು ೭೫೦ ಕ್ಕೂ ಹೆಚ್ಚು ಕಲ್ಲಿನ ಮೆಟ್ಟಿಲುಗಳು ಹತ್ತಿ ಈ ಬೆಟ್ಟದ ಮೇಲೆ ತಲುಪಿದೆವು. ಕೆಳಗಿನ ಊರು ನೋಡಲು ತುಂಬಾ ಸೊಗಸಾಗಿತ್ತು. ಇತಿಹಾಸದ ಪುಸ್ತಕದಲ್ಲಿ ಓದಿದಂತಹ ವಿಷಯಗಳನ್ನ ಅಲ್ಲಿ ಒಬ್ಬರು ಮಾರ್ಗದರ್ಶಿ ಬಂದ ಪ್ರವಾಸಿಗರಿಗೆ ತಿಳಿಸುತ್ತಾ ಇದ್ದರು. ಸ್ವಲ್ಪ ಹಾಗೆ ಸುತ್ತಾಡಿದ ನಂತರ ನಾವುಗಳು ನಮ್ಮ ಬೆಂಗಳೂರಿಗೆ ಹೊರಟೆವು. ಮಧ್ಯದಲ್ಲಿ ಕಾಪಿ ಚಹಾ ಕುಡಿಯೋದಕ್ಕೆ ಒಂದು ಬ್ರೇಕ್  ಅಷ್ಟೇ. ಸೀದಾ ಮನೆ ಬಂದು ತಲುಪಿದೆವು. 

No comments:

Journey of Love: Chapter 8: Love in Full Bloom

As the train neared Bangalore, Arjun and Latha found themselves lost in each other's gaze, their hearts overflowing with love and gratit...